2024ರ ನವೆಂಬರ್ ತಿಂಗಳಲ್ಲಿ ಭಾರತದಿಂದ ರಫ್ತಾಗಿರುವ ಸ್ಮಾರ್ಟ್ಫೋನ್ಗಳ ಮೌಲ್ಯ 20,000 ಕೋಟಿ ರೂಗಿಂತಲೂ ಹೆಚ್ಚು. 2023ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಶೇ 92ರಷ್ಟು ಹೆಚ್ಚು ಸ್ಮಾರ್ಟ್ಫೋನ್ಗಳ ರಫ್ತಾಗಿದೆ.
ಭಾರತದಿಂದ ಸ್ಮಾರ್ಟ್ಫೋನ್ಗಳ ರಫ್ತು ನಿರಂತರವಾಗಿ ಏರುತ್ತಿದೆ. ನವೆಂಬರ್ ತಿಂಗಳಲ್ಲಿ ಶೇ. 92ರಷ್ಟು ರಫ್ತು ಹೆಚ್ಚಳವಾಗಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ನವೆಂಬರ್ನಲ್ಲಿ 20,000 ಕೋಟಿ ರೂ ಮೌಲ್ಯದ ಮೊಬೈಲ್ ಫೋನ್ಗಳು ರಫ್ತಾಗಿವೆ. ಕಳೆದ ವರ್ಷದ ಇದೇ ನವೆಂಬರ್ ತಿಂಗಳಲ್ಲಿ 10,634 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳು ರಫ್ತಾಗಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಬಹುತೇಕ ಎರಡು ಪಟ್ಟು ರಫ್ತು ಏರಿದೆ. ಉದ್ಯಮ ಸಂಘಟನೆಗಳು ಮತ್ತು ಕಂಪನಿಗಳ ಹೇಳಿಕೆ ಇತ್ಯಾದಿ ವತಿಯಿಂದ ಕಲೆಹಾಕಲಾದ ಮಾಹಿತಿ ಆಧರಿಸಿ ಈ ಅಂಕಿ ಅಂಶವನ್ನು ನೀಡಲಾಗಿದೆ.
ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕೆ ಮತ್ತು ರಫ್ತು ಹೆಚ್ಚಲು ಕಾರಣವಾಗಿರುವುದು ಪಿಎಲ್ಐ ಸ್ಕೀಮ್. ಉತ್ಪಾದನೆಯ ಪ್ರಮಾಣ ಆಧಾರಿತವಾಗಿ ಸರ್ಕಾರದಿಂದ ಧನಸಹಾಯ ನೀಡಲಾಗುವ ಈ ಪಿಎಲ್ಐ ಸ್ಕೀಮ್ ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ವರದಾನವಾದಂತಿದೆ. ಆಯಪಲ್ ಮತ್ತು ಸ್ಯಾಮ್ಸುಂಗ್ ಸಂಸ್ಥೆಗಳು ಈ ಸ್ಕೀಮ್ ಅನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಅಸೆಂಬ್ಲಿಂಗ್ ಮಾತ್ರವಲ್ಲದೇ ಸ್ಮಾರ್ಟ್ಫೋನ್ ಬಿಡಿಭಾಗಗಳ ಉತ್ಪಾದಿಸುವ ಕಂಪನಿಗಳೂ ಕೂಡ ಭಾರತದಲ್ಲಿ ನೆಲೆ ಸ್ಥಾಪಿಸುವ ದಾರಿಯಲ್ಲಿವೆ. ಇವೆಲ್ಲವೂ ಕೂಡ ಮುಂದಿನ ದಿನಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಬಲ ತುಂಬುವ ನಿರೀಕ್ಷೆ ಇದೆ.
0 Comments