ತುಳುನಾಡಿನ ಜಾನಪದ ಕುಣಿತಗಳಲ್ಲಿ ಮಾಂತ್ರಿಕ ಕುಣಿತಗಳು ಒಂದು ಇವು ಅತ್ಯಂತ ಪ್ರಭಾವಶಾಲಿ ಕೂಡ ಹೌದು. ಪಟ್ಟಣದಲ್ಲಿ ನಾವು ಇವುಗಳನ್ನು ಗಮನಿಸದಿದ್ದರು ಹಳ್ಳಿಗಳಲ್ಲಿ ಈಗಲೂ ಆಚರಣೆಯು ಉಳಿದುಕೊಂಡಿದೆ. ಈ ಕುಣಿತದ ಹಿಂದೆ ಅನೇಕ ಸಂಗತಿಗಳಿವೆ. ಯಾವುದೇ ಪ್ರಕೃತಿಯ ಏರುಪೇರು ಅಥವಾ ರೋಗಗಳು ಕಾಲಿಟ್ಟಾಗ ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಹೀಗೆ ಅನೇಕ ಸಮಸ್ಯೆಗಳಿಗೆ ಮನೋವೈಜ್ಞಾನಿಕ ಚಿಕಿತ್ಸೆ ಎಂದರೆ ಕುಣಿತಗಳನ್ನು ಬಳಸಿಕೊಂಡು ಮಂತ್ರದ ಮೂಲಕ ಅವುಗಳನ್ನು ದೂರ ಮಾಡುವ ಅಪರೂಪದ ಕುಣಿತವೇ ಮಾಂತ್ರಿಕ ಕುಣಿತಗಳು.
ತುಳುನಾಡಿನ ಜಾನಪದ ಸಂಸ್ಕೃತಿಯ ಆಚರಣೆಯು ರೋಗಗಳನ್ನು ತಡೆಗಟ್ಟಲು ಮತ್ತು ವೈದ್ಯಕೀಯ ಪದ್ಧತಿಯಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಬಹುಶಃ ಆಟಿಕಳೆಂಜವೇ ತೆಗೆದುಕೊಂಡರೆ ಮನೆ ಮನೆಗೆ ಹೋಗಿ ರೋಗಗಳು ಅದು ಮನೋರೋಗವೇ ಆಗಿರಲಿ ಅಥವಾ ಜ್ವರ ಶೀತ ಕೆಮ್ಮು ಹೀಗೆ ಪ್ರಕೃತಿ ವಿಕೋಪದಂತಹ ಅನಿಷ್ಟಗಳನ್ನು ತನ್ನ ಕುಣಿತದ ಮೂಲಕ ಹೋಗಲಾಡಿಸುವುದೇ ಆಟಿಕಳೆಂಜದ ಮೂಲ ಉದ್ದೇಶ ಹಾಗಾಗೇ ಕಳೆಂಜ ಅಂದರೆ ಕಳೆಯುವ ಅಂಜೋವು ಎಂಬ ಅರ್ಥವಿದೆ. ಆಟಿಕಳೆಂಜದ ವೇಷಭೂಷಣ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕುಣಿತದ ಹಾಡಿನಲ್ಲಿ ಪಾಠಾಂತರಗಳಿದ್ದರೂ ಹಾಡಿನ ವಸ್ತು ಎಲ್ಲಾ ಪ್ರದೇಶಗಳಲ್ಲೂ ಸರ್ವೇಸಾಮಾನ್ಯ ಒಂದೇ ಆಗಿರುತ್ತದೆ.
ಕಾಸರಗೋಡಿನಲ್ಲಿ ಆಟಿ ತಿಂಗಳಲ್ಲಿ ಒಂದು ಯಕ್ಷಿಣಿ ಕುಣಿತ ನಡೆಯುತ್ತದೆ. ಇದನ್ನು ಮಕ್ವಿ ಎನ್ನುತ್ತಾರೆ. ಸುಂದರವಾಗಿ ಸ್ತ್ರೀ ವೇಷ ಧರಿಸಿದ ಒಬ್ಬ ಪುರುಷನು ತೆಂಬರೆಯ ಹಿಮ್ಮೇಳ ಮತ್ತು ಹಾಡಿನ ಗತಿಗನುಸಾರವಾಗಿ ಮನೆ ಮನೆಗೆ ಬಂದು ಕುಣಿತ ನಡೆಸಿ ಮನೆಯನ್ನು ಆವರಿಸಿದ ದುಷ್ಟಶಕ್ತಿಗಳನ್ನು ದೂರಗೊಳಿಸಿ ಮನೆಯನ್ನು ಪವಿತ್ರಗೊಳಿಸಿ ಹೋಗುತ್ತಾನೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಆಟಿಕಳೆಂಜ ಕುಣಿತಕ್ಕೆ ಸಂವಾದಿಯಾಗಿ ಕಾರ್ಕಳ ಮತ್ತು ಉಡುಪಿಯಲ್ಲಿ ಮಾಂಕಾಳಿ ಕುಣಿತ ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಶಕ್ತಿಯ ಆರಾಧನಾ ಕುಣಿತವೆಂದು ಕೂಡ ಪರಿಗಣಿಸಬಹುದು. ಈ ಕುಣಿತದಲ್ಲಿ ಹಾಳೆಯಿಂದ ರಚಿಸಲಾದ ಮುಖವಾಡ ಧರಿಸಿಕೊಳ್ಳುತ್ತಾರೆ. ಹಾಸನ ,ಚಿಕ್ಕಮಗಳೂರು ಕಡೆ ನಡೆಯುವ ಸೋಮನ ಕುಣಿತವನ್ನು ಈ ಕುಣಿತ ಹೋಲುತ್ತದೆ. ಅಲ್ಲಿ ದೀಪವಾಳಿ ಸಂದರ್ಭದಲ್ಲಿ ಈ ಕುಣಿತ ನಡೆಸುತ್ತಾರೆ.
ಯಾವುದೇ ಮನೆ ಮಂದಿಯಲ್ಲಿ ಯಾರಾದರೂ ಆಘಾತದಿಂದ ಅಥವಾ ಭಯದಿಂದ ಜ್ವರ ಪೀಡಿತರಾಗಿದ್ದಾರೆ. ಅವರ ಜ್ವರ ಪರಿಹಾರಕ್ಕೆ ಮನಸ್ಸನ್ನು ನಿರಾಳಗೊಳಿಸುವ ಸಲುವಾಗಿ ಮೂಲಿಕ ಚಿಕಿತ್ಸೆ ಜೊತೆಗೆ "ಕಳೆಯುವ" ಆಚರಣೆ ನಡೆಸುತ್ತಾರೆ. ಈ ಆಚರಣೆಯಲ್ಲಿ ಕಾಲೆ ಭೂತದ ವೇಷಧಾರಿಯೊಬ್ಬ ಕುಣಿತ ನಡೆಸಿ ರೋಗಿಗೆ ಪ್ರತಿಭಯವನ್ನುಂಟು ಮಾಡುತ್ತಾನೆ. ನೆಲದಲ್ಲಿ ಬಣ್ಣದ ಹುಡಿಯಿಂದ ಬರೆದ ವಿಕೃತ ರೂಪ, ಅದರ ಬದಿಯಲ್ಲಿಟ್ಟ ಬಲಿಗೆ ಕೋಳಿ ಕತ್ತು ಕತ್ತರಿಸಿ ಕಾಲೆಯ ಈ ದೃಶ್ಯ ಕಾಲೆಯ ನರ್ತನ ಇವೆಲ್ಲ ರೋಗಿಯ ಮನಸ್ಸನ್ನು ಆವರಿಸಿಕೊಂಡಿದ್ದ ಕಾಲೆಯ ಫೋಬಿಯಾ ದೂರಗೊಳಿಸಿ ತನ್ನನ್ನು ರೋಗಮುಕ್ತನಾಗಿ ಮಾಡುತ್ತದೆ ಹಾಗಿಗೀ ಇದನ್ನು ಕಾಲೆಕೋಲ ಎನ್ನುತ್ತಾರೆ.
ಜನಪದರು ಮನೋರೋಗಕ್ಕೊಳಗಾದಾಗ ಅವರನ್ನು ಖಿನ್ನತೆ ಆವರಿಸುತ್ತದೆ. ಇದನ್ನು ಕುಲೆ ಪತ್ತುನೆ ಎಂದು ತುಳುವಿನಲ್ಲಿ ಹೇಳುತ್ತಾರೆ. ಕುಲೆ ಎಂದರೆ ಸತ್ತು ಹೋದವರ ಜೀವ. ಈ ರೀತಿ ಕುಲೆ ಹಿಡಿದಾಗ ಆ ಕುಲೆಯನ್ನು ಹಿಡಿದವನ ಶರೀರದಿಂದ ಬಿಡಿಸುವ ಒಂದು ಮನೋವೈದ್ಯಕೀಯ ಚಿಕಿತ್ಸೆ ನಡೆಸುತ್ತಾರೆ. ಈ ಚಿಕಿತ್ಸೆಯೂ ಕೂಡ ಒಂದು ಆಚರಣೆ ಮತ್ತು ಕುಣಿತ ಪ್ರದರ್ಶನದ ಮೂಲಕ ನಡೆಯುತ್ತದೆ. ಈ ಕುಣಿತವನ್ನು ರಾಹು-ಗುಳಿಗ ಕೋಲವೆನ್ನುತ್ತಾರೆ. ರಾಹು,-ಗುಳಿಗನ ವೇಷಧಾರಿಯೂ ವೇಷತೊಟ್ಟ ಬಳಿಕ ಭಯಾನಕವಾಗಿ ಕಾಣಿಸಿಕೊಳ್ಳುತ್ತಾನೆ. ಕಾಲೆ ಕೋಲದಂತೆ ಇಲ್ಲಿಯೂ ಕೂಡಾ ಆಚರಣಾ ವಿಧಾನದಲ್ಲಿ ಕುಣಿತವು ಪ್ರಮುಖ್ಯವಾಗುತ್ತದೆ.
ಈ ರೀತಿ ತುಳುನಾಡಿನ ಜಾನಪದ ಕುಣಿತಗಳಲ್ಲಿ ಮಾಂತ್ರಿಕ ಕುಣಿತಗಳು ದಿನೇದಿನೇ ಕಡಿಮೆಯಾಗುತ್ತಿದ್ದು ಅಲ್ಲಿ ಇಲ್ಲಿ ಹಳ್ಳಿಯ ಜನರಲ್ಲಿ ಈ ಆಚರಣೆಗಳನ್ನು ಕಾಣಬಹುದು ಆದರೆ ಈ ಕುಣಿತಗಳು ಒಂದು ಮನೋವೈಜ್ಞಾನಿಕ ಚಿಕಿತ್ಸೆ ಖಂಡಿತ ಹೌದು ಮತ್ತು ಇಂತಹ ಕುಣಿತಗಳು ನಾಶವಾಗದೆ ಪ್ರತಿಯೊಂದು ಕುಣಿತಗಳ ಮಹತ್ವ ತಿಳಿದು ಆಚರಣೆ ಮಾಡಿದರೆ ದುಷ್ಟಶಕ್ತಿಗಳಿಂದ ಯಾವುದೇ ರೋಗಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬುವುದೇ ಹಿರಿಯರ ಮೂಲ ಉದ್ದೇಶ.
0 Comments