ಭರವಸೆಯ ಯುವ ಭಾಗವತರು ಭರತ್ ರಾಜ್ ವಿ ಶೆಟ್ಟಿ ಸಿದ್ಧಕಟ್ಟೆ

ಯಕ್ಷಗಾನದ ವೇಷಧಾರಿ ಹಾಗೂ ಪ್ರಸಂಗಕರ್ತರಾಗಿದ್ದ ಉಭಯ ತಿಟ್ಟುಗಳಲ್ಲಿ ಕಲಾಪ್ರೌಢಿಮೆ ಮೆರೆದ ದಿ.ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಹಾಗೂ ಜಯಂತಿ ವಿ ಶೆಟ್ಟಿ ಇವರ ಮಗನಾಗಿ 18.12.1996 ರಂದು ಭರತ್ ರಾಜ್ ವಿ ಶೆಟ್ಟಿ ಸಿದ್ಧಕಟ್ಟೆ ಅವರ ಜನನ. ಮೂಡಬಿದ್ರೆಯ MITE College ನಲ್ಲಿ ಬಿ.ಇ ಮೆಕಾನಿಕಲ್ ಇವರ ವಿದ್ಯಾಭ್ಯಾಸ. ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರ ಯಕ್ಷಗಾನ ಗುರುಗಳು.


ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರೇರಣೆಯಾದದ್ದು ನನ್ನ ತಂದೆಯವರು. ಕಾಲೇಜು ದಿನಗಳವರೆಗೂ ಯಕ್ಷಗಾನದಲ್ಲಿ ಆಸಕ್ತಿ ಇರಲಿಲ್ಲ. ತಂದೆ ತೀರಿಹೋದ ಬಳಿಕ ತಂದೆಯ ಸಾಧನೆಯ ಅರಿವಾಗಿ ಆಸಕ್ತಿ ಮೂಡಿತು. ನಾನೂ ಈ ಕಲೆಯನ್ನು ಕಲಿಯಬೇಕು ಎನ್ನುವ ಛಲ ಹುಟ್ಟಿತು. ಶಾಲೆ ಹಾಗೂ ಪಿಯುಸಿ ಕಾಲೇಜು ದಿನಗಳಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಕಾರಣ ಭಾಗವತಿಕೆಯಲ್ಲಿ ಆಸಕ್ತಿ ಬಂತು. ಯಕ್ಷಗಾನ ಕಲಿಯುವ ಆಸಕ್ತಿ ಇರಲಿಲ್ಲವಾದರೂ ಬಾಲ್ಯದಲ್ಲಿ ಮನೆಯಲ್ಲಿ ಯಕ್ಷಗಾನ ಕ್ಯಾಸೆಟ್, ಸಿ.ಡಿ ನೋಡುತ್ತಿದ್ದೆ , ಯಕ್ಷಗಾನ ಪದ್ಯಗಳನ್ನು ಕೇಳುತ್ತಿದ್ದೆ. ನನ್ನಷ್ಟಕ್ಕೆ ನಾನು ಹಾಡುತ್ತಿದ್ದದ್ದನ್ನು ಅಪ್ಪ ಗಮನಿಸಿ ಎಷ್ಟೋ ಸಾರಿ ಜೋರು ಮಾಡಿದ್ದಾರೆ. ಅವರಿಗೆ ಮಕ್ಕಳು ಯಕ್ಷಗಾನ ಕ್ಷೇತ್ರಕ್ಕೆ ಬರುವುದು ಇಷ್ಟವಿರಲಿಲ್ಲ. ಕಾರಣ ಅವರ ಕಾಲದಲ್ಲಿ ಕಷ್ಟವಿತ್ತು .ಅದರ ಆದಾಯದಲ್ಲಿ ಜೀವನ ಸಾಗಿಸುವುದು ಅಸಾಧ್ಯವೆನ್ನುವುದರಿಂದ ನಮಗೆ ಆಸಕ್ತಿ ಹುಟ್ಟಲು ಬಿಡಲಿಲ್ಲ. ಹೆಚ್ಚಾಗಿ ದಿನೇಶ ಅಮ್ಮಣ್ಣಾಯರು, ಬಲಿಪ ನಾರಾಯಣ ಭಾಗವತರು ಹಾಗೂ ಪಟ್ಲ ಸತೀಶ್ ಶೆಟ್ಟಿಯವರ ಪದ್ಯಗಳನ್ನು ಕೇಳುತ್ತಿದ್ದೆ. ಯಕ್ಷಗಾನಕ್ಕೆ ಬರಲು ಪ್ರೇರಣೆಯಾದವರು ನನ್ನ ತಂದೆ. ಆದರೆ ಯಕ್ಷಗಾನದ ಭಾಗವತಿಕೆ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಗಿರುವುದು ಪಟ್ಲ ಶ್ರೀ ಸತೀಶ್ ಶೆಟ್ಟಿಯವರ ಭಾಗವತಿಕೆ.

ನೆಚ್ಚಿನ ಪ್ರಸಂಗಗಳು:-
ಶ್ರೀದೇವಿ ಮಹಾತ್ಮೆ, ಮಾನಿಷಾದ, ಲೀಲಾಮಾನುಷವಿಗ್ರಹ, ಶ್ರೀಕೃಷ್ಣಪರಂಧಾಮ.

ಮಧ್ಯಮಾವತಿ, ಮೋಹನ, ಹಿಂದೋಳ, ಚಾರುಕೇಶಿ ಇವರ ನೆಚ್ಚಿನ ರಾಗಗಳು.
ಯಕ್ಷಗಾನದಲ್ಲಿ ನೆಚ್ಚಿನ ಚೆಂಡೆ ಹಾಗೂ ಮದ್ದಳೆವಾದಕರ ಬಗ್ಗೆ ಕೇಳಿದಾಗ ಆ ದಿನದ ಪ್ರದರ್ಶನದಲ್ಲಿ ಯಾವ ಕಲಾವಿದರಿದ್ದರೂ ಹೊಂದಿಕೊಂಡು ಭಾಗವಹಿಸುತ್ತೇನೆ. ಇದರಲ್ಲಿ ಆಯ್ಕೆ ಕಷ್ಟ ಎಂದು ಹೇಳುತ್ತಾರೆ ಭರತ್ ರಾಜ್.
ಪಟ್ಲ ಸತೀಶ್ ಶೆಟ್ಟಿಯವರು ನನ್ನ ನೆಚ್ಚಿನ ಭಾಗವತರು ಹಾಗೂ ನನಗೆ ಆದರ್ಶ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಈಗಿನ ಕಾಲಘಟ್ಟದಲ್ಲಿ ವಿದ್ಯಾವಂತ ಯುವಕಲಾವಿದರ ಆಗಮನದಿಂದ ಹೆಚ್ಚು ಗೌರವವನ್ನು ಪಡೆದಿದೆ. ನಿಜವಾಗಿಯೂ ಈಗ ಬರುತ್ತಿರುವ ಯುವಕಲಾವಿದರು ಹಿರಿಯ ಕಲಾವಿದರ ಅನುಭವ ಹಾಗೂ ಮಾರ್ಗದರ್ಶನ ಪಡೆದು ಹಿಂದಿನ ಪರಂಪರೆಯನ್ನು ಇನ್ನಷ್ಟು ಬೆಳೆಸುತ್ತಿದ್ದಾರೆ. ಇದು ನಿಜವಾಗಿಯೂ ಹೆಮ್ಮೆ ಪಡಬೇಕಾದ ವಿಚಾರ. ಯಕ್ಷಗಾನ ಕಲಾವಿದರಿಗೆ ಈಗ ಬಹಳ ಗೌರವವಿದೆ. ಆಸಕ್ತಿ, ಶ್ರಮ, ಶ್ರದ್ಧೆ ಇದ್ದವರಿಗೆ ಖಂಡಿತ ಅವಕಾಶವಿದೆ.



ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರೇ ಕಲಾವಿದರಲ್ಲಿ ಇನ್ನೂ ಹೆಚ್ಚು ಸಾಧಿಸಬೇಕು ಎನ್ನುವ ಛಲ ಮೂಡಿಸುವವರು. ಯಾಕಂದರೆ ಅವರು ಒಳ್ಳೆಯದನ್ನು ಪ್ರೋತ್ಸಾಹಿಸುತ್ತಾರೆ. ಹಾಗೆಯೇ ಕೆಟ್ಟದ್ದನ್ನು ಖಂಡಿಸುತ್ತಾರೆ. ಎರಡೂ ವಿಚಾರದಲ್ಲೂ ಅವರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಸಾಧಿಸಲು ಹುರಿದುಂಬಿಸುತ್ತಾರೆ. ಪ್ರೇಕ್ಷಕರ ಪ್ರೋತ್ಸಾಹ ಕಲಾವಿದನಾದವನಿಗೆ ಆಮ್ಲಜನಕ ಇದ್ದ ಹಾಗೆ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:- 
ಯಕ್ಷಗಾನ ಕ್ಷೇತ್ರದಲ್ಲಿ ಕಲಿಯುವುದು ತುಂಬಾ ಇದೆ. ಯಕ್ಷಗಾನದ ಎಲ್ಲಾ ವಿಭಾಗಗಳ ಬಗ್ಗೆ ಕಲಿತು ಮುಂದೊಂದು ದಿನ ಒಬ್ಬ ಸಮರ್ಥ ಭಾಗವತನಾಗಬೇಕು ಎಂಬ ಹಂಬಲವಿದೆ. ನನ್ನ ತೀರ್ಥರೂಪರಿಗೆ ಸಂದಬೇಕಾದ ಗೌರವದ ಕುರಿತು ಕೆಲವು ಯೋಚನೆಗಳು ಇದೆ.

ಪ್ರಥಮ ರಂಗಪ್ರವೇಶ ಕಟೀಲು ಕ್ಷೇತ್ರದಲ್ಲಿ ನಡೆದ ಕಟೀಲು 2ನೇ ಮೇಳದ ರಂಗಸ್ಥಳದಲ್ಲಿ ಆಗಿರುವುದು ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಪ್ರಸ್ತುತ ಹವ್ಯಾಸಿ ಕಲಾವಿದನಾಗಿದ್ದೇನೆ. ಕೆರೆಕಾಡು ಮೇಳ, ಅಮೃತೇಶ್ವರ ವಾಮಂಜೂರು ಮೇಳ ಹಾಸನ್ಮಾನ ಹಾಗೂ ಬೇರೆ ಹಲವು ಸಂಘಗಳ ಮೇಳದಲ್ಲಿ ಸೇವೆಯನ್ನು ಸಲ್ಲಿಸಿ ಯಕ್ಷಗಾನ ರಂಗದಲ್ಲಿ ಒಟ್ಟು 4 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಭರತ್ ರಾಜ್.ಸಂಗೀತ, ಕ್ರಿಕೆಟ್ ಇವರ ಹವ್ಯಾಸಗಳು.




ಪ್ರಶಸ್ತಿ:-
ಹಲವು ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ.
ಅಜೆಕಾರು ಕಲಾಭಿಮಾನಿ ಬಳಗ (ರಿ) ಮುಂಬೈ ಇದರ 2024ನೇ ವರ್ಷದ ಜುಲೈ ತಿಂಗಳ ತಾಳಮದ್ದಳೆ ಸರಣಿಯಲ್ಲಿ "Appreciation Award - 2024" ಲಭಿಸಿರುತ್ತದೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ
  ಸುಪ್ರಭಾತ
  ಶಕ್ತಿನಗರ ಮಂಗಳೂರು.

Post a Comment

0 Comments